ಬೆಂಗಳೂರು: ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಎಐ (AI) ಜಾಗತಿಕ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಅರೆಬೆತ್ತಲೆ ಪ್ರತಿಭಟನೆಯನ್ನು ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ತೀವ್ರವಾಗಿ ಖಂಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಸಭ್ಯತೆ ಅತ್ಯಂತ ಮುಖ್ಯ. ಇಂಡಿಯಾ ಎಐ ಶೃಂಗಸಭೆ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡಿದ್ದು ಸರಿಯಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ಘನತೆ, ಶಿಸ್ತು ಮತ್ತು ಜವಾಬ್ದಾರಿ ಇರಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಪಕ್ಷದ ವಿರುದ್ಧವೇ ನೀಡಿದ ಈ ಹೇಳಿಕೆ ದೊಡ್ಡ ಸುದ್ದಿಯಾಗುತ್ತಿದ್ದಂತೆ, ಮಾರ್ಗರೇಟ್ ಆಳ್ವ ಅವರು ಎಕ್ಸ್ (X) ಮೂಲಕ ಸ್ಪಷ್ಟನೆ ನೀಡಿದ್ದಾರೆ. "ಆರ್‌ಎಸ್‌ಎಸ್ ಮತ್ತು ಬಿಜೆಪಿಗಿಂತ ಭಿನ್ನವಾಗಿ, ಕಾಂಗ್ರೆಸ್ ಪಕ್ಷವು ಯಾವಾಗಲೂ ವೈವಿಧ್ಯಮಯ ದೃಷ್ಟಿಕೋನಗಳು, ಭಿನ್ನಾಭಿಪ್ರಾಯ ಮತ್ತು ಸಕಾರಾತ್ಮಕ ಟೀಕೆಗಳನ್ನು ಅನುಮತಿಸಿದೆ ಮತ್ತು ಸ್ವಾಗತಿಸಿದೆ. ಎಐ ಸಮ್ಮೇಳನದಲ್ಲಿ ನಡೆದ ಪ್ರತಿಭಟನೆಯ ಕುರಿತ ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತು ಅದರ ಸಿದ್ಧಾಂತದ ಬಗೆಗಿನ ನನ್ನ ಅಚಲ ಬದ್ಧತೆಯನ್ನು ಇದು ಕಡಿಮೆ ಮಾಡುವುದಿಲ್ಲ," ಎಂದು ಅವರು ಬರೆದುಕೊಂಡಿದ್ದಾರೆ.